ಕೇಂದ್ರೀಕರಣ

ಸರ್ಕಾರ ಅಗತ್ಯವಾಗಿ ನೆರವೇರಿಸಬೇಕೆಂದು ಗೊತ್ತು ಮಾಡಿರುವ, ಸರ್ಕಾರ ಮಾಡುವ, ಮಾಡಬೇಕೆಂದಿರುವ ಕಾರ್ಯಗಳ ನಿರ್ವಹಣೆ, ಇದಕ್ಕಾಗಿ ನಿರ್ಮಿತಗೊಳ್ಳುವ ಸರ್ಕಾರದ ಅಂಗರಚನೆ, ರಾಜ್ಯಾಡಳಿತ ವ್ಯವಸ್ಥೆ, ಸರ್ಕಾರ ಪಡೆದುಕೊಳ್ಳುವ ಅಧಿಕಾರ, ಹೊಂದುವ ಶಕ್ತಿ ಮತ್ತು ಅಧಿಕಾರ ಚಲಾವಣೆಯ ರೀತಿ ಇವುಗಳ ಹಿನ್ನೆಲೆಯಲ್ಲಿ ಕೇಂದ್ರೀಕರಣ ಮತ್ತು ವಿಕೇಂದ್ರೀಕರಣ ಎಂಬ ಶಬ್ದಗಳು ರಾಜ್ಯಶಾಸ್ತ್ರದಲ್ಲಿ ಇತ್ತೀಚೆಗೆ ಹೆಚ್ಚು ಪ್ರಾಶಸ್ತ್ಯ ಪಡೆದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರೀಕರಣ ಎಂಬ ಶಬ್ದಕ್ಕೆ ಈ ರೀತಿ ಅರ್ಥವಿದೆ: ಪಡೆದ ಅಧಿಕಾರದ ಚಲಾವಣೆಯನ್ನು ಕಾರ್ಯನಿರ್ವಹಣೆಗಾಗಿ ಒಂದೆಡೆ ಕ್ರೋಢೀಕರಿಸುವುದು, ಮಾಡುವ ಮತ್ತು ಮಾಡಬೇಕಾದ ಕೆಲಸಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು, ಉಂಟು ಅಥವಾ ಇಲ್ಲವೆಂದು ಹೇಳುವ ಶಕ್ತಿಯನ್ನು ಆದಷ್ಟು ಮಟ್ಟಿಗೆ ಒಂದೆಡೆ ತಂಗಿರುವಂತೆ ಶೇಖರಣೆ ಮಾಡುವುದು. ಸರ್ಕಾರಕ್ಕೆ ಹಲವಾರು ಕರ್ತವ್ಯಗಳಿವೆ. ಇವನ್ನು ಅದು ತನ್ನ ಅನೇಕ ಇಲಾಖೆಗಳ ಮೂಲಕ ಮಾಡುತ್ತದೆ. ಪ್ರತಿಯೊಂದು ಕಾರ್ಯವನ್ನೂ ಸರ್ಕಾರವೇ ನೇರವಾಗಿ ನಿರ್ವಹಿಸುವ ಜವಾಬ್ದಾರಿ ಹೊರಬಹುದು ಇಲ್ಲವೇ ಕೆಲವು ಕರ್ತವ್ಯಗಳನ್ನು ತಾನು ವಹಿಸಿಕೊಂಡು ಉಳಿದ ಹಲವನ್ನು ಸ್ಥಳೀಯ ಸರ್ಕಾರಗಳಿಗೂ ಸಂಘಸಂಸ್ಥೆಗಳಿಗೂ ವಹಿಸಬಹುದು. ಹಾಗೆ ವಹಿಸಿಕೊಡುವುದಾದರೆ, ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಣೆ ಆಗುತ್ತಿದೆಯೇ ಎಂದು ನೋಡುವ ಜವಾಬ್ದಾರಿಯನ್ನು ಮಾತ್ರ ಸರ್ಕಾರ ವಹಿಸಿಕೊಳ್ಳುತ್ತದೆ. ಹೀಗೆ ಮಾಡದೆ ಎಲ್ಲ ಕರ್ತವ್ಯಗಳನ್ನು ಸ್ವತ: ನಿರ್ವಹಿಸುವ ದೃಷ್ಟಿಯಿಂದ ಸರ್ಕಾರವೇ ಅದನ್ನು ವಹಿಸಿಕೊಳ್ಳುವುದಾದರೆ ಅದು ಅಧಿಕಾರದ ಮತ್ತು ಕರ್ತವ್ಯಗಳ ಕೇಂದ್ರೀಕರಣವಾಗುತ್ತದೆ. ಆಡಳಿತ ವ್ಯವಸ್ಥೆಯ ಸ್ವರೂಪಕ್ಕೆ ಅನುಗುಣವಾಗಿ ಕೆಂದ್ರೀಕರಣದಲ್ಲಿಯ ಸಂಬಂಧಗಳೂ ವ್ಯತ್ಯಾಸಗೊಳ್ಳುತ್ತದೆ. ಅವನ್ನೂ ಈ ರೀತಿ ನಿರೂಪಿಸಬಹುದು: 1 ಏಕಾತ್ಮಕ (ಯೂನಿಟರಿ) ಸರ್ಕಾರವ್ಯವಸ್ಥೆಯಲ್ಲಿ ಸರ್ಕಾರದೊಡನೆ ಸ್ಥಳೀಯ ಸರ್ಕಾರಗಳು ಹೊಂದಿರುವ ಮತ್ತು ಹೊಂದಿರಬೇಕಾದ ಸಂಬಂಧಗಳು; 2 ದ್ವ್ಯಾತ್ಮಕ ಅಥವಾ ಸಂಯುಕ್ತ (ಫೆಡರಲ್) ಸರ್ಕಾರ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದೊಡನೆ ಅದರ ಅಂಗರಾಜ್ಯಗಳು (ಕಾನ್ಸ್‍ಸ್ಟಿಟ್ಯುಯೆಂಟ್ ಸ್ಟೇಟ್ಸ್) ಹೊಂದಿರುವ ಮತ್ತು ಹೊಂದಿರಬೇಕಾದ ಸಂಬಂಧಗಳು; 3 ಶಾಸನಾಂಗ ಮತ್ತು ಕಾರ್ಯಾಂಗ ಪಡೆದಿರುವ ಮತ್ತು ಪಡೆಯುವ ಅಧಿಕಾರಗಳಲ್ಲಿ ಹೆಚ್ಚುಹೆಚ್ಚಾಗಿ ಮತ್ತು ಅಧಿಕ ಪ್ರಮಾಣದಲ್ಲಿ ಕಾರ್ಯಾಂಗದಲ್ಲಿ ಅಧಿಕಾರದ ಕೇಂದ್ರೀಕರಣದಿಂದ ಏರ್ಪಡುವ ಸಂಬಂಧಗಳು; 4 ಕಾರ್ಯಾಂಗದ ದೊಡ್ಡ ದೊಡ್ಡ ಇಲಾಖೆಗಳಲ್ಲಿ ಅಥವಾ ಸರ್ಕಾರ ನಿರ್ಮಿಸುವ ಅನೇಕ ಆಯೋಗ ಮತ್ತು ನಿಯೋಗಗಳಲ್ಲಿ ಅಧಿಕಾರ ಸಂಪೂರ್ಣವಾಗಿ ನೆಲೆಗೊಳ್ಳುವುದರಿಂದ ಏರ್ಪಡುವ ಸಂಬಂಧಗಳು.

ಕೇಂದ್ರೀಕರಣದ ಹುಟ್ಟು, ಅದರ ವಿನ್ಯಾಸ ಮತ್ತು ವ್ಯಾಪ್ತಿಯನ್ನು ವಿವರಿಸುವಾಗ ಕೇಂದ್ರೀಕರಣವೆಂಬ ಶಬ್ದಕ್ಕೆ ಸಮೀಪದಲ್ಲಿರುವ ಇನ್ನು ಕೆಲವು ಶಬ್ದಗಳಿಗೂ ಇದಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸುವುದು ಅಗತ್ಯ. ಅಧಿಕಾರವಿಭಜನೆ (ಡಿವಿಷನ್ ಆಫ್ ಪವರ್ಸ್), ಅಧಿಕಾರದ ವಿಂಗಡನೆ ಅಥವಾ ಪ್ರತ್ಯೇಕತೆ (ಸೆಪರೇಷನ್ ಆಫ್ ಪವರ್ಸ್) ಮತ್ತು ಅಧಿಕಾರ ನಿಯೋಜನೆ (ಡೆಲಿಗೇಷನ್ ಆಫ್ ಪವರ್ಸ್)-ಇವೇ ಆ ಶಬ್ದಗಳು. ಅಧಿಕಾರ ವಿಭಜನೆಯನ್ನು ಮುಖ್ಯವಾಗಿ ದ್ವಿಮುಖ ಅಥವಾ ಸಂಯುಕ್ತ ಸಂವಿಧಾನದಲ್ಲಿ ಕಾಣಬಹುದು. ಈ ತೆರನಾದ ಸಂವಿಧಾನದಲ್ಲಿ ಎರಡು ಸರ್ಕಾರಗಳಿರುತ್ತವೆ : ಒಂದು ಕೇಂದ್ರ ಸರ್ಕಾರ, ಇನ್ನೊಂದು ಪ್ರಾಂತ್ಯ ಸರ್ಕಾರ ಅಥವಾ ರಾಜ್ಯ ಸರ್ಕಾರ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ ಹಾಗೆ ಕೆಲವು ವಿಷಯಗಳಿದ್ದರೆ, ಇನ್ನು ಕೆಲವು ವಿಷಯಗಳು ರಾಜ್ಯ ಸರ್ಕಾರಗಳಿಗೆ ಒಳಪಟ್ಟಿರುತ್ತವೆ; ಮತ್ತೆ ಕೆಲವು ವಿಷಯಗಳು ಕೇಂದ್ರ ಮತ್ತು ರಾಜ್ಯಸರ್ಕಾರಗಳೆರಡಕ್ಕೂ ಒಳಪಟ್ಟಿರುತ್ತವೆ. ಆಯಾ ಸರ್ಕಾರಗಳಿಗೆ ಅವುಗಳ ವ್ಯಾಪ್ತಿಗೆ ಸೇರಿದ ವಿಷಯಗಳಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಆದರೆ, ಒಂದು ಸಂವಿಧಾನ ಸಂಯುಕ್ತ ಮಾದರಿಯ ಸಂವಿಧಾನವಾಗಿದ್ದರೂ ಕೇಂದ್ರಸರ್ಕಾರದಲ್ಲೂ ರಾಜ್ಯಸರ್ಕಾರದಲ್ಲೂ ಅವುಗಳಿಗೆ ಒಳಪಟ್ಟ ವಿಷಯಗಳಲ್ಲಿ ಕೇಂದ್ರೀಕರಣವಿರಬಹುದು. ಅಧಿಕಾರದ ವಿಭಜನೆಯಾಗಿದ್ದಾಗಲೂ ಸರ್ಕಾರ ತನ್ನ ಅಧಿಕಾರವನ್ನು ಒಂದೆಡೆಯೇ ಕೇಂದ್ರೀಕರಿಸಬಹುದು; ಅಥವಾ ಹಲವು ಮಟ್ಟಗಳಲ್ಲಿ ಅದನ್ನು ಚಲಾವಣೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬಹುದು. ಅಧಿಕಾರ ವಿಭಜನೆ ಕೇಂದ್ರೀಕರಣದ ವಿರುದ್ಧದ ಒಂದು ವ್ಯವಸ್ಥೆಯಾದರೂ ಅಷ್ಟು ಮಾತ್ರದಿಂದ ಅಧಿಕಾರದ ಕೇಂದ್ರೀಕರಣ ಮುಕ್ತಾಯಗೊಂಡಂತಾಗುವುದಿಲ್ಲ. ಅಧಿಕಾರ ವಿಂಗಡನೆ ಅಥವಾ ಪ್ರತ್ಯೇಕತೆಯಲ್ಲಿ ಸರ್ಕಾರದ ಮೂರು ಅಂಗಗಳಾದ ಕಾರ್ಯಾಂಗ, ಶಾಸನಾಂಗ ಮತ್ತು ನ್ಯಾಯಾಂಗ ಒಂದು ಅಂಗದ ಅಥವಾ ಒಬ್ಬನ ಅಧೀನಕ್ಕೆ ಒಳಪಟ್ಟು, ಆ ಒಂದರಲ್ಲೊ ಅಥವಾ ಒಬ್ಬನಲ್ಲೊ ಎಲ್ಲ ಶಕ್ತಿಗಳೂ ಕೇಂದ್ರೀಕೃತವಾಗುವಂತೆ ಮಾಡಬಹುದು; ಅಥವಾ ಪ್ರತಿಯೊಂದು ಅಂಗವೂ ಇನ್ನೊಂದರ ಅಧೀನಕ್ಕೆ ಒಳಪಡದೆ ಸ್ವತಂತ್ರವಾಗಿ ಉಸಿರಾಡುವಂತೆ ಮಾಡಬಹುದು.	

	ಅಧಿಕಾರದ ವಿಕೇಂದ್ರೀಕರಣಕ್ಕೂ ಅಧಿಕಾರದ ಪ್ರತ್ಯೇಕತೆಗೂ ವ್ಯತ್ಯಾಸವಿದೆ. ಪ್ರತ್ಯೇಕತೆ ಇದ್ದರೂ ಒಂದೇ ಅಂಗದಲ್ಲಿ ಅದರ ವ್ಯಾಪ್ತಿಗೆ ಒಳಪಟ್ಟ ಕರ್ತವ್ಯಗಳ ನಿರ್ವಹಣೆ ಕೇಂದ್ರೀಕೃತವಾಗಿರಬಹುದು. ನೇರ ನಿರ್ಧಾರ, ನೇರ ಹೊಣೆ ಇದರ ಗುರುತಾಗಿ ಯಾವ ಹಂತದಲ್ಲೂ ಸ್ವತಂತ್ರ ಅಥವಾ ಪ್ರತ್ಯೇಕ ನಿರ್ಧಾರಕ್ಕೆ ಎಡೆಯಿಲ್ಲದಿರಬಹುದು. ಮಾಡಬೇಕಾದ ಕರ್ತವ್ಯ, ಚಲಾಯಿಸುವ ಅಧಿಕಾರ ಇವುಗಳನ್ನು ಇನ್ನೊಬ್ಬರು ತನ್ನ ಪರವಾಗಿ ಚಲಾಯಿಸುವುದಕ್ಕೆ ಅಧಿಕಾರ ನೀಡುವುದೇ ಅಧಿಕಾರ ನಿಯೋಜನೆ. ಆದರೆ ಅಧಿಕಾರವನ್ನು ನಿಯೋಜನೆಗೊಳಿಸುವವನದೇ ಪರಮಾಧಿಕಾರ. ಇದನ್ನು ಆತ ಕೊಡದಿದ್ದರೂ ಇರಬಹುದು. ಅಧಿಕಾರ ನಿಯೋಜನೆ ಇದ್ದರೂ ಕೇಂದ್ರೀಕರಣವಿರಬಹುದು; ಮತ್ತು ಸ್ವತಂತ್ರವಾಗಿ, ಸರಿಸಮಾನವಾಗಿ, ಪ್ರತ್ಯೇಕವಾಗಿ ಕಾದಿಟ್ಟ ವಿಷಯಗಳಲ್ಲಿ ಸ್ವತಂತ್ರವಾಗಿ ವರ್ತಿಸಲು ಅವಕಾಶವಿಲ್ಲ. ಕೇಂದ್ರೀಕರಣಕ್ಕೆ ಪ್ರತಿಯಾಗಿರುವ ವಿಕೇಂದ್ರೀಕರಣದೊಡನೆ ಹೋಲಿಸಿದರೆ ಕೇಂದ್ರೀಕರಣಕ್ಕೂ ಅಧಿಕಾರ ನಿಯೋಜನೆಗೂ ಇರುವ ಸಂಬಂಧ ವ್ಯಕ್ತವಾಗುತ್ತದೆ.

	ರಾಜ್ಯಾಡಳಿತ ನಿರ್ವಹಣೆಯಲ್ಲಿ ಕೇಂದ್ರೀಕರಣದ ಜನ್ಮವನ್ನು ಸಾಮ್ರಾಜ್ಯಗಳ ಮತ್ತು ರಾಷ್ಟ್ರೀಯ ರಾಜ್ಯಗಳ (ನ್ಯಾಷನಲ್ ಸ್ಟೇಟ್ಸ್) ಉದಯದಲ್ಲಿ ಸ್ಪಷ್ಟವಾಗಿ ಕಾಣಬಹುದು. ಇದರ ಹಿನ್ನೆಲೆ ಊಳಿಗಮಾನ್ಯ ಪದ್ಧತಿಯ ಕಾಲದಲ್ಲಿ ನೆಲೆಗೊಂಡಿದ್ದ ರಾಜ್ಯಾಡಳಿತ ವಿಧಾನ. ಈ ವ್ಯವಸ್ಥೆಯಲ್ಲಿ ರಾಜ, ರಾಜ್ಯಸರ್ಕಾರ ಮತ್ತು ಅಧಿಕಾರವರ್ಗ ಇವು ಹೆಸರಿಗೆ ಮಾತ್ರ ಇದ್ದುವೇ ವಿನಹ ಸರ್ಕಾರದ ಅಧಿಕಾರದ ವ್ಯಾಪ್ತಿ ಅತಿ ಕಡಿಮೆಯಿತ್ತು. ಸರ್ಕಾರದ ಅಧಿಕಾರವನ್ನು ಲಕ್ಷಿಸುವವರೇ ಇರಲಿಲ್ಲ. ವಿಶೇಷವಾಗಿ ವಿಚ್ಛಿದ್ರಗೊಂಡ ಹಾಗೂ ಸ್ವತಂತ್ರ ಸ್ವಯಮಾಡಳಿತ ಉಳ್ಳ ಗ್ರಾಮ, ಪಟ್ಟಣ ಮತ್ತು ಪ್ರದೇಶಗಳು ತಮ್ಮ ಅಧಿಕಾರವನ್ನು ಚಲಾಯಿಸುತ್ತಿದ್ದವು. ಈ ಪ್ರವೃತ್ತಿಗೆ ಪ್ರತಿಯಾಗಿ ಉದ್ಭವಿಸದ್ದೇ ಸಾಮ್ರಾಜ್ಯಾಧಿಕಾರ ಮತ್ತು ರಾಷ್ಟ್ರೀಯ ರಾಜ್ಯಾಧಿಕಾರ. ಇಂತಹ ರಾಜ್ಯಗಳಲ್ಲಿ ರಾಜ್ಯಕ್ಕೆ ರಾಜನೇ ಒಡೆಯ. ರಾಜಕಾರ್ಯ ಮತ್ತು ಸಾರ್ವಜನಿಕ ಕಾರ್ಯಗಳು ಅವನ ಅಧೀನಕ್ಕೆ ಒಳಪಟ್ಟು ನಡೆಯಬೇಕು. ಯಾವ ಕಾರ್ಯಗಳು ನಡೆಯಬೇಕು, ಯಾವುವು ನಡೆಯಬಾರದು ಎಂಬುದರ ಬಗ್ಗೆ ರಾಜನ ನಿರ್ಧಾರವೇ ಕೊನೆಯದು. ರಾಜ ಒಂದು ನಿರ್ಧಾರಕ್ಕೆ ಬಂದ ಕೂಡಲೇ ಅದನ್ನು ತನ್ನ ಸಾಮಂತರು, ಅಧೀನ ಅಧಿಕಾರಿಗಳು ಇವರ ಮೂಲಕ ನೆರವೇರಿಸಿಕೊಳ್ಳುತ್ತಾನೆ. ರಾಜ್ಯಾಡಳಿತದ ಪ್ರತಿಯೊಂದು ವಿಷಯದಲ್ಲೂ ರಾಜಾಜ್ಞೆಗೆ ಅಥವಾ ರಾಜ ಕೊಡುವ ಆದೇಶಕ್ಕೆ ಎದುರಿಲ್ಲ. ರಾಜನಿಗೆ ಸರಿಸಮಾನರಾಗಿ ಅಧಿಕಾರ ಚಲಾಯಿಸುವ ಹಕ್ಕು ಅಥವಾ ಅಧಿಕಾರ ಯಾರಿಗೂ ಇಲ್ಲ. ಕ್ರಮೇಣ ಪ್ರಜಾಪ್ರತಿನಿಧಿ ಸರ್ಕಾರ ಬಂದರೂ ಇದೇ ತೆರನಾದ ರಾಜ್ಯಾಡಳಿತ ಕ್ರಮವನ್ನೂ ಏಕಾತ್ಮಕ ಸರ್ಕಾರಗಳಲ್ಲಿ ಕಾಣಬಹುದು. ಇದನ್ನು ವಿರೋಧಿಸಿ, ಅಧಿಕಾರ ವಿಕೇಂದ್ರೀಕರಣವಾಗಬೇಕೆಂದೂ ನಡೆಸಿದ ಚಳವಳಿಯೇ ಸ್ಥಳೀಯ ಸರ್ಕಾರಗಳ ಜನ್ಮಕ್ಕೆ ನಾಂದಿ. ಇಂಥ ಸಂದರ್ಭಗಳಲ್ಲಿ ಇಡೀ ದೇಶಕ್ಕೆ ಅನ್ವಯಿಸುವ ಕೆಲವು ಮುಖ್ಯ ವಿಷಯಗಳನ್ನು ಸರ್ಕಾರ ತನ್ನ ಅಧೀನದಲ್ಲಿಟ್ಟುಕೊಂಡು ಸ್ಥಳೀಯ ಸ್ವರೂಪದ ಹಲವಾರು ವಿಷಯಗಳನ್ನು ಸ್ಥಳೀಯ ಸರ್ಕಾರಗಳ ನಿರ್ವಹಣೆಗೆ ಬಿಡುತ್ತದೆ. ಉದಾಹರಣೆ : ಮೈಸೂರು ರಾಜ್ಯದಲ್ಲಿ ಸ್ಥಳೀಯ ಸರ್ಕಾರ ಪ್ರರೂಪಗಳಾದ ನಿಗಮ (ಕಾರ್ಪೋರೇಷನ್), ಪೌರಸಭೆ, ತಾಲ್ಲೂಕುಮಂಡಳಿ ಮತ್ತು ಪಂಚಾಯಿತಿಗಳಿಗೂ ರಾಜ್ಯಸರ್ಕಾರಕ್ಕೂ ಇರುವ ಅಧಿಕಾರಗಳ ಹಂಚಿಕೆ. ಇದು ರಾಜ್ಯಾಡಳಿತ ಕ್ರಮದಲ್ಲಿ ವಿಕೇಂದ್ರಿಕರಣ. ಇಂತಹ ವ್ಯವಸ್ಥೆ ಏಕಾತ್ಮಕ ಸರ್ಕಾರಗಳಲ್ಲಿ ಮಾತ್ರವಿರದೇ ದ್ವ್ಯಾತ್ಮಕ ಅಥವಾ ಸಂಯುಕ್ತ ಸರ್ಕಾರಗಳಲ್ಲೂ ಇರಬಹುದು. ರಾಜ್ಯದಲ್ಲಿ ಏಕಾತ್ಮಕ ಸರ್ಕಾರವಿರಲಿ, ದ್ವ್ಯಾತ್ಮಕ ಸರ್ಕಾರವಿರಲಿ, ಮುಖ್ಯವಾಗಿ ಗಮನಿಸಬೇಕಾದ್ದು ಆಡಳಿತ ವಿಭಜನೆಯ ಜೊತೆಗೆ ಅಧಿಕಾರದ ವಿಭಜನೆ. ಈ ಪರಿಣಾಮವಾಗಿ ರಾಜ್ಯಾಡಳಿತದಲ್ಲಿ ಮುಖ್ಯವಾಗಿ ಎರಡು ವಿಧಾನಗಳು ಆಚರಣೆಯಲ್ಲಿ ಬಂದಿವೆ. ಒಂದು, ಫ್ರಾನ್ಸ್ ದೇಶದಲ್ಲಿ ನೆಪೋಲಿಯನ್ನನ ಕಾಲದಲ್ಲಿ ಆಚರಣೆಗೆ ಬಂದ ವಿಧಾನ; ಇನ್ನೊಂದು, ಆಡಳಿತ ಮತ್ತು ಅಧಿಕಾರ ಚಲಾವಣೆಯನ್ನು ಕೇವಲ ಒಬ್ಬ ಅಧಿಕಾರಿಯ ವಿಚಕ್ಷಣೆ ಮತ್ತು ನಿರ್ವಹಣೆಗೆ ಗುರಿಪಡಿಸದೆ, ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ತಂತಮ್ಮ ವ್ಯಾಪ್ತಿಗಳಿಗೆ ಒಳಪಟ್ಟ ವಿಷಯಗಳಲ್ಲಿ ಸ್ವತಂತ್ರವಾಗಿ ವರ್ತಿಸಲು ಕೊಡುವ ಅವಕಾಶ.

ಕೇಂದ್ರೀಕರಣದ ವ್ಯಾಪ್ತಿ ಮತ್ತು ಆಧುನಿಕ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶಗಳಲ್ಲಿ ಕೇಂದ್ರೀಕರಣ ತಳೆಯುತ್ತಿರುವ ಬದಲಾವಣೆಗಳನ್ನು ಗಮನಿಸುವುದು ಅಗತ್ಯ. ಬಹಳ ಕಾಲದವರೆಗೆ, ಅಂದರೆ ಸುಮಾರು ಒಂದನೆಯ ಮಹಾಯುದ್ಧದವರೆಗೆ ಸರ್ಕಾರದ ಕೆಲಸಗಳೆಂದರೆ ಆಂತರಿಕ ಶಾಂತಿ ಮತ್ತು ಶಿಸ್ತುಪಾಲನೆ, ಹೊರಗಿನ ವಿಪತ್ತುಗಳಿಂದ ದೇಶದ ರಕ್ಷಣೆ ಮತ್ತು ನ್ಯಾಯಪಾಲನೆ ಇವು ಮಾತ್ರವಾಗಿದ್ದವು. ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರ, ತನ್ನ ಹಿತವೇನೆಂಬುದನ್ನು ಚೆನ್ನಾಗಿ ಬಲ್ಲ. ಆದ್ದರಿಂದ ಆತ ಕಾನೂನಿನ ಉಲ್ಲಂಘನೆಯಾಗದಂತೆ, ಕಾನೂನಿನಿಂದ ರಕ್ಷಿತವಾದ ಹಕ್ಕುಬಾಧ್ಯತೆಗಳಿಗೆ ಧಕ್ಕೆ ಬರದಂತೆ ಒಬ್ಬೊಂಟಿಗನಾಗಿಯೋ ಇನ್ನೊಬ್ಬರೊಡನೆ ಕೂಡಿಯೋ ವ್ಯವಹಾರಗಳನ್ನು ನಡೆಸಬಹುದು. ಇದನ್ನು ಗಮನಿಸಿಯೇ ಸ್ಥಳೀಯ ಮತ್ತು ಪ್ರಾಂತೀಯ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳೀಯ ಸರ್ಕಾರಗಳ ರಚನೆಗೆ ಮತ್ತು ಸ್ವಯಮಾಡಳಿತ ಸಂಘಸಂಸ್ಥೆಗಳಿಗೆ ಉತ್ತೇಜನ ಕೊಡಲಾಯಿತು. ಇಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಪೌರರು ತಾವೇ ಒಂದು ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಡುವುದಕ್ಕೆ ಮುಂದೆ ಬರುವುದಾದರೆ ಸ್ವಾಗತ. ಅದಕ್ಕೆ ಸರ್ಕಾರದ ಬೆಂಬಲ ಮತ್ತು ಪ್ರೋತ್ಸಾಹವಿರುತ್ತದೆ. ಈ ಉದ್ದೇಶ ಸಾಧನೆಗಾಗಿ ಸ್ಥಳೀಯ ಸರ್ಕಾರಗಳಂತೆ ಅನೇಕ ಕಂಪನಿಗಳು, ಸಂಘಸಂಸ್ಥೆಗಳು, ನಿಗಮಗಳು, ಆಯೋಗಗಳು ಮತ್ತು ನಿಯೋಗಗಳು ಏರ್ಪಟ್ಟುವು. ಆದರೆ, ಕ್ರಮೇಣ ಸಾರ್ವಜನಿಕ ವಿಷಯಗಳಲ್ಲಿ ಸರ್ಕಾರ ತಟಸ್ಥ ನೀತಿ ತಾಳುವುದು ಕಷ್ಟವಾಯಿತು. ನಿರುದ್ಯೋಗ ಪರಿಹಾರ, ಕಾರ್ಮಿಕರ ಬೇಡಿಕೆಗಳ ಪೂರೈಕೆ, ದೇಶದ ಆರ್ಥಿಕೋದ್ಯಮಕ್ಕೆ ನೆರವು, ಸಾರ್ವಜನಿಕ ಆರೋಗ್ಯ, ವಿದ್ಯಾಭ್ಯಾಸ ಇತರ ಆರ್ಥಿಕ ಸಮಸ್ಯೆಗಳ ಪರಿಹಾರ-ಇವುಗಳಲ್ಲಿ ಸರ್ಕಾರದ ಅಂತರಾಯಣ (ಇಂಟರ್‍ವೆನ್ಷನ್) ಅಗತ್ಯವಾಯಿತು. ಈ ಹೊಸ ಸನ್ನಿವೇಶಕ್ಕೆ ಅನುಗುಣವಾಗಿ ರಾಜ್ಯಾಡಳಿತವನ್ನು ವ್ಯವಸ್ಥೆಗೊಳಿಸುವುದು ಅನಿವಾರ್ಯವಾಗಿ ಕಂಡುಬಂತು. ಅಧಿಕಾರವರ್ಗಕ್ಕೆ ಹೆಚ್ಚುಹೆಚ್ಚಾಗಿ ವಿವೇಚನಾಧಿಕಾರವನ್ನು ಕೊಡಲಾಯಿತು; ಮತ್ತು ಸ್ಥೂಲಶಾಸನಕ್ಕೆ ವಿರೋಧವಿಲ್ಲದೆ ಅಗತ್ಯವಾದ ವ್ಯಾವಹಾರಿಕ ಮತ್ತು ಪರಿಸ್ಥಿತಿಗನುಗುಣವಾದ ವಿಧಿಗಳನ್ನು ರಚಿಸಿಕೊಳ್ಳುವುದಕ್ಕೆ ಕಾರ್ಯಾಂಗಕ್ಕೆ ಶಾಸನಾಂಗ ಅಧಿಕಾರ ನೀಡಿತು. ಈ ಪ್ರವೃತ್ತಿಗಳನ್ನು ಅಧಿಕಾರಿಶಾಹಿಯ ಮತ್ತು ನವ ನಿರಂಕುಶತೆಯ ಬೆಳವಣಿಗೆ ಎಂದು ಹೇಳಲಾಗಿದೆ.

	ಬೆಳವಣಿಗೆ ಅಷ್ಟಕ್ಕೇ ನಿಂತಿಲ್ಲ. ಇದುವರೆಗೆ ಶಾಶ್ವತವೆಂದು ನಂಬಿದ್ದ ರಾಜ್ಯಾಡಳಿತ ಕ್ರಮವನ್ನು ಯೋಜನಾತತ್ತ್ವ ತಲೆಕೆಳಗು ಮಾಡಿದೆ. ಯೋಜನಾತತ್ತ್ವದಲ್ಲಿ ಅಡಗಿರುವ ಅಂಶಗಳು ಎರಡು : ಒಂದು, ಏನು ಮಾಡಬೇಕು ಅಥವಾ ಮಾಡಬಾರದು. ಯಾವುದಕ್ಕೆ ಪ್ರಾಶಸ್ತ್ಯ ಕೊಡಬೇಕು ಅಥವಾ ಬಾರದು, ಯಾವ ಕ್ಷೇತ್ರವನ್ನು ಬೆಳೆಸಬೇಕು, ಬಲಪಡಿಸಬೇಕು, ಎಷ್ಟು ನಿಯೋಜಿತ ಕಾಲದಲ್ಲಿ ಕಾರ್ಯಕ್ರಮ ಕಾರ್ಯಗತವಾಗಬೇಕು ಎಂಬುದು ಒಂದು. ಯೋಜನೆಗೆ ಒಳಪಟ್ಟ ಬೆಳವಣಿಗೆ ಮತ್ತು ವಿಸ್ತಾರವನ್ನು ಸರ್ಕಾರವೇ ನೇರ ಜವಾಬ್ದಾರಿಯಿಂದ ಕೈಗೂಡಿಸುವುದು, ಇದಕ್ಕೆ ಅಡ್ಢಿ ಬರುವ ಸ್ವತಂತ್ರ ಪ್ರವೃತ್ತಿಗಳು ಮತ್ತು ವ್ಯವಹಾರಗಳನ್ನು ತಡೆಗಟ್ಟುವುದು ಮತ್ತು ಯೋಜನೆಯ ರೂಪರೇಖೆಗಳಿಗೆ ಎಲ್ಲ ಪ್ರವೃತ್ತಿಗಳೂ ವ್ಯವಹಾರಗಳೂ ಒಳಪಡುವಂತೆ ಗೊತ್ತು ಮಾಡುವುದು ಇನ್ನೊಂದು. ಯೋಜನೆಯಲ್ಲಿ ಎಲ್ಲ ವ್ಯವಹಾರಗಳೂ ಯೋಜನೆಯ ವ್ಯವಸ್ಥೆಗೆ ಒಳಪಟ್ಟಿರುವುದಲ್ಲದೆ, ಸರ್ಕಾರವೇ ಮುಂದೆ ಬಂದು ಹಲವು ಕಾರ್ಯಗಳನ್ನು ನಿರ್ವಹಿಸುತ್ತದೆ. ಕೃಷಿಪ್ರಧಾನ ದೇಶಗಳು ಕೈಗಾರಿಕಾಕರಣವನ್ನು ಜಾಗ್ರತೆಯಾಗಿ ಸಾಧಿಸಲೂ ದೇಶದ ಆರ್ಥಿಕ ಬೆಳವಣಿಗೆ ಆದಷ್ಟು ಶೀಘ್ರವಾಗಿ ಗರಿಕಟ್ಟಿಕೊಳ್ಳುವಂತೆ ಮಾಡಲು ನಿರುದ್ಯೋಗವನ್ನು ಹೋಗಲಾಡಿಸಲೂ ಯೋಜನಾವಿಧಾನವನ್ನು ಹೆಚ್ಚುಹೆಚ್ಚಾಗಿ ಅನುಸರಿಸುತ್ತಿವೆ. ಯೋಜನಾತತ್ತ್ವ ಕೇಂದ್ರೀಕರಣದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಬೃಹದ್ಗಾತ್ರದಲ್ಲಿ ಬೆಳವಣಿಗೆಯನ್ನು ಯೋಜಿಸಿದ ಕೂಡಲೇ ನಿಯಂತ್ರಣ, ಅಧಿಕಾರದ ಕೇಂದ್ರೀಕರಣ ಮತ್ತು ಸರ್ಕಾರದ ನೇರ ಜವಾಬ್ದಾರೀ-ಇವು ಬಂದೇ ಬರುತ್ತವೆ. ಇಲ್ಲಿ ಅಧಿಕಾರದ ವಿಭಜನೆಯ ಪ್ರಶ್ನೆಯೇ ಬರುವುದಿಲ್ಲ. ಕೆಲಸದ ಪರಿಮಾಣ, ವ್ಯಾಪ್ತಿ, ಕಾಲಾವಕಾಶ ಎಲ್ಲವೂ ಕೇಂದ್ರೀಕರಣದ ಕಡೆಗೇ ಓಲುತ್ತವೆ. ಸರ್ಕಾರ ಇಂಥ ಹೊಣೆಯನ್ನು ನಿರ್ವಹಿಸಬೇಕಾದರೆ ಅದಕ್ಕೆ ಸಂಪೂರ್ಣ ಪರಮಾಧಿಕಾರವೂ ನಿರ್ಧಾರಕ ಶಕ್ತಿಯೂ ಇರುವುದು ಅಗತ್ಯವಾಗುತ್ತದೆ.

	ಕೇಂದ್ರೀಕರಣವಿರಬೇಕೆ? ಇದ್ದರೆ ಎಷ್ಟು ಪ್ರಮಾಣದಲ್ಲಿ ಇರಬೇಕು? ಎಂಬ ಪ್ರಶ್ನೆಗೆ ನೇರವಾಗಿ ಉತ್ತರ ಕೊಡುವುದು ಕಷ್ಟ.. ಇದು ಸಂಪೂರ್ಣವಾಗಿ ಆಯಾ ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿದೆ ಮತ್ತು ಈ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರದ ಮೇಲೆ ವಿಧಿಸುವ ಕರ್ತವ್ಯಗಳನ್ನೇ ಅನುಸರಿಸುತ್ತದೆ. ಸರ್ಕಾರದ ಕರ್ತವ್ಯಗಳು, ವಿವೇಚನೆ ಮತ್ತು ಜವಾಬ್ದಾರಿ ಹೆಚ್ಚುತ್ತಿರುವಾಗ ಅಧಿಕಾರಕೇಂದ್ರೀಕರಣ ಅಗತ್ಯವಾಗಿಯೇ ತೀರುತ್ತದೆ. ಕೇಂದ್ರೀಕರಣದಿಂದ ಅನೇಕ ಅನಿಷ್ಟಗಳು ಸಂಭವಿಸುವುದು ಸಹಜ: ಮುನ್ನುಗ್ಗಿ ಸ್ವತಂತ್ರವಾಗಿ ನಿರ್ಧಾರದ ಸ್ವೀಕಾರ, ಅಧಿಕಾರಶಾಹಿಯ ಬೆಳವಣಿಗೆ, ಸ್ಥಳೀಯ, ಆದ್ಯತೆಗಳಿಗೆ ಧಕ್ಕೆ-ಇವು ಕೆಲವು. ಆದರೆ ಕೇಂದ್ರೀಕರಣದಿಂದ ಕೆಲಸದಲ್ಲಿ ಏಕಾಗ್ರತೆ, ಹೊಣೆಗಾರಿಕೆ, ಬೃಹದ್ಗಾತ್ರದಲ್ಲಿ ಬೆಳವಣಿಗೆಯನ್ನು ನಿಯೋಜಿಸುವಾಗ ಮಿತವ್ಯಯ, ತಜ್ಞರ ನೆರವು, ಆಧುನಿಕ ತಾಂತ್ರಿಕತೆಯ ಅನ್ವಯ, ಶೀಘ್ರತೆ, ಹೆಚ್ಚಿನ ಹಣಸೌಲಭ್ಯ ಮುಂತಾದ ಅನುಕೂಲಗಳು ಲಭ್ಯವಾಗುತ್ತವೆ.                                
   	(ಎಲ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ